ಪಂಚಜನ -
1 ಒಬ್ಬ ಬ್ರಹ್ಮ. ಈತ ಭಗವಂತನ ಅಪ್ಪಣೆಯಂತೆ ತನ್ನ ಮಗಳಾದ ಆಸಿಕ್ನಿಯನ್ನು ಚಾಕ್ಷುಷ ಮನ್ವಂತರದ ದಕ್ಷನಿಗೆ ಕೊಟ್ಟು ಮದುವೆ ಮಾಡಿದ. ಈಕೆಯಲ್ಲಿ ದಕ್ಷ 60 ಮಂದಿ ಕನ್ಯೆಯರನ್ನು ಪಡೆದು ಧರ್ಮ, ಕಶ್ಯಪ, ಚಂದ್ರ, ರುದ್ರ, ಅಂಗೀರಸಾದಿಗಳಿಗೆ ಕನ್ಯಾದಾನ ಮಾಡಿದ.

	2 ಪ್ರಹ್ಲಾದನ ತಮ್ಮನಾದ ಸಂಹ್ಲಾದ ದೈತ್ಯನ ಮಗನಿಗೂ ಇದೇ ಹೆಸರು. ಸಮುದ್ರದಲ್ಲಿ ಅಡಗಿಕೊಂಡು ಸಂಚರಿಸುತ್ತಿದ್ದ ಈ ರಾಕ್ಷಸ ಬಲರಾಮ ಶ್ರೀಕೃಷ್ಣರ ಗುರುಗಳಾದ ಸಾಂದೀಪಿನಿಯ ಪುತ್ರನನ್ನು ಕದ್ದೊಯ್ದ. ರಾಮಕೃಷ್ಣರು ವಿದ್ಯಾಭ್ಯಾಸ ಮುಗಿಸಿ ಗುರುಕಾಣಿಕೆಯನ್ನು ಸಮರ್ಪಿಸಲು ಕೇಳಿದಾಗ, ಗುರುದಂಪತಿಗಳು ಪ್ರಭಾಸಕ್ಷೇತ್ರದ ಸಮುದ್ರತೀರದಲ್ಲಿ ಮುಳುಗಿ ಮೃತನಾದ ತಮ್ಮ ಮಗನನ್ನು ಬದುಕಿಸಿ ಕೊಡಲು ಕೇಳುತ್ತಾರೆ. ಗುರುಪುತ್ರನನ್ನು ಪಂಚಜನನೆಂಬ ರಾಕ್ಷಸ ನುಂಗಿದುದಾಗಿ ಸಮುದ್ರರಾಜ ಅವರಿಗೆ ತಿಳಿಸುತ್ತಾನೆ. ರಾಮಕೃಷ್ಣರು ಆ ರಾಕ್ಷಸನನ್ನು ಕೊಂದು ನೋಡಿದಾಗ ಗರ್ಭದಲ್ಲಿ ಪಾಂಚಜನ್ಯವೆಂಬ ಉತ್ತಮವಾದ ಶಂಖದೊರಕಿತೇ ವಿನಾ ಗುರುಪುತ್ರನ ಸುಳಿವು ಸಿಗಲಿಲ್ಲ. ಅನಂತರ ಅವನು ಯಮನ ಪಟ್ಟಣಕ್ಕೆ ಬಂದು ಯಮನನ್ನು ಕೇಳಿಕೊಂಡು ಗುರುಪುತ್ರನನ್ನು ಬದುಕಿಸಿ ಸಾಂದೀಪನಿಗೆ ಒಪ್ಪಿಸುತ್ತಾರೆ.											(ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ